WTC
Audio:
Drama
  • Drama
  • Non-Drama
Text Size

ಪ್ರಕಟನೆ 15 - ಕನ್ನಡ - Easy-to-Read Version - Bible.is - ERVWTC

  1  ನಂತರ ಪರಲೋಕದಲ್ಲಿ ಮತ್ತೊಂದು ಅದ್ಭುತವನ್ನು ನಾನು ನೋಡಿದೆನು. ಅದು ಮಹಾ ಆಶ್ಚರ್ಯಕರವಾಗಿತ್ತು. ಏಳು ಉಪದ್ರವಗಳನ್ನು ತರುವ ಏಳು ಮಂದಿ ದೇವದೂತರು ಅಲ್ಲಿದ್ದರು. ದೇವರ ಕೋಪವು ಈ ಉಪದ್ರವಗಳೊಂದಿಗೆ ಮುಗಿಯುತ್ತಿದ್ದುದರಿಂದ ಇವು ಕಡೆಯ ಉಪದ್ರವಗಳಾಗಿದ್ದವು.   2  ಬೆಂಕಿಯನ್ನು ಬೆರಸಿದ ಗಾಜಿನ ಸಮುದ್ರದಂತೆ ಕಾಣಿಸುವ ಏನೋ ಒಂದು ನನಗೆ ಕಾಣಿಸಿತು. ಮೃಗವನ್ನು, ಅದರ ವಿಗ್ರಹವನ್ನು ಮತ್ತು ಅದರ ಹೆಸರಿನ ಸಂಖ್ಯೆಯನ್ನು ಸೋಲಿಸಿ ಜಯಗಳಿಸಿದವರೆಲ್ಲರೂ ಸಮುದ್ರ ತೀರದಲ್ಲಿ ನಿಂತಿದ್ದರು. ದೇವರು ಅವರಿಗೆ ನೀಡಿದ ತಂತಿವಾದ್ಯಗಳು ಅವರಲ್ಲಿದ್ದವು.   3  ಅವರು ದೇವರ ಸೇವಕನಾದ ಮೋಶೆಯ ಗೀತೆಯನ್ನು ಮತ್ತು ಕುರಿಮರಿಯಾದಾತನ ಗೀತೆಯನ್ನು ಹಾಡಿದರು: “ಪ್ರಭುವೇ, ಸರ್ವಶಕ್ತನಾದ ದೇವರೇ, ನೀನು ಮಹತ್ತಾದ ಕಾರ್ಯಗಳನ್ನೂ ಆಶ್ಚರ್ಯಕರವಾದ ಕಾರ್ಯಗಳನ್ನೂ ಮಾಡುವೆ. ಸರ್ವಜನಾಂಗಗಳ ರಾಜನೇ, ನಿನ್ನ ಮಾರ್ಗಗಳು ನ್ಯಾಯವೂ ಸತ್ಯವೂ ಆಗಿವೆ.   4  ಪ್ರಭುವೇ, ಜನರೆಲ್ಲರೂ ನಿನಗೆ ಭಯಗೊಳ್ಳುತ್ತಾರೆ; ಜನರೆಲ್ಲರೂ ನಿನ್ನ ಹೆಸರನ್ನು ಸ್ತುತಿಸುತ್ತಾರೆ. ನೀನು ಮಾತ್ರ ಪರಿಶುದ್ಧನಾದವನು. ನೀನು ಯೋಗ್ಯವಾದ ಕಾರ್ಯಗಳನ್ನು ಮಾಡುತ್ತೀ ಎಂಬುದು ಸ್ಪಷ್ಟವಾಗಿರುವುದರಿಂದ ಜನರೆಲ್ಲರೂ ನಿನ್ನ ಸನ್ನಿಧಿಗೆ ಬಂದು ನಿನ್ನನ್ನು ಆರಾಧಿಸುತ್ತಾರೆ.”   5  ಇದಾದ ನಂತರ ನಾನು ನೋಡಿದಾಗ ಪರಲೋಕದ ಆಲಯವು (ದೇವದರ್ಶನ ಗುಡಾರವು) ತೆರೆಯಿತು.   6  ಏಳು ಉಪದ್ರವಗಳನ್ನು ತರುವ ಏಳು ಮಂದಿ ದೇವದೂತರು ಆಲಯದಿಂದ ಹೊರಗೆ ಬಂದರು. ಅವರು ಶುಭ್ರವಾದ ಮತ್ತು ಪ್ರಕಾಶಮಾನವಾದ ನಾರುಮಡಿಯನ್ನು ಧರಿಸಿದ್ದರು. ಅವರು ಎದೆಯ ಸುತ್ತಲೂ ಚಿನ್ನದ ಪಟ್ಟಿಗಳನ್ನು ಕಟ್ಟಿಕೊಂಡಿದ್ದರು.   7  ನಾಲ್ಕು ಜೀವಿಗಳಲ್ಲಿ ಒಂದು ಜೀವಿ ಈ ಏಳು ದೇವದೂತರಿಗೆ ಏಳು ಚಿನ್ನದ ಪಾತ್ರೆಗಳನ್ನು ನೀಡಿತು. ಈ ಪಾತ್ರೆಗಳು ಯುಗಯುಗಾಂತರಗಳಲ್ಲಿಯೂ ಜೀವಿಸುವ ದೇವರ ಕೋಪದಿಂದ ತುಂಬಿದ್ದವು.   8  ದೇವರ ವೈಭವ ಮತ್ತು ಶಕ್ತಿಯ ಹೊಗೆಯಿಂದ ಆಲಯವು ತುಂಬಿಹೋಯಿತು. ಏಳು ದೇವದೂತರ ಏಳು ಉಪದ್ರವಗಳು ಮುಗಿಯುವ ತನಕ ಆಲಯದಲ್ಲಿ ಪ್ರವೇಶಿಸಲು ಯಾರಿಗೂ ಸಾಧ್ಯವಿರಲಿಲ್ಲ.