WTC
Audio:
Drama
  • Drama
  • Non-Drama
Text Size

ಇಬ್ರಿಯರಿಗೆ 8 - ಕನ್ನಡ - Easy-to-Read Version - Bible.is - ERVWTC

  1  ನಾವು ಹೇಳುವ ಸಂಗತಿಗಳಲ್ಲಿ ಮುಖ್ಯವಾದದ್ದೇನೆಂದರೆ, ನಿಮಗೆ ಹೇಳಿದಂತೆಯೇ ನಮಗೊಬ್ಬ ಪ್ರಧಾನ ಯಾಜಕನಿದ್ದಾನೆ. ಆತನು ಪರಲೋಕದಲ್ಲಿ ದೇವರ ಸಿಂಹಾಸನದ ಬಲಭಾಗದಲ್ಲಿ ಈಗ ಕುಳಿತುಕೊಂಡಿದ್ದಾನೆ.   2  ಆತನು ಮಹಾ ಪವಿತ್ರಸ್ಥಳದಲ್ಲಿ ಅಂದರೆ ಜನರಿಂದ ನಿರ್ಮಿತವಾಗದೆ, ದೇವರಿಂದಲೇ ನಿರ್ಮಿಸಲ್ಪಟ್ಟಿರುವ ನಿಜವಾದ ದೇವದರ್ಶನ ಗುಡಾರದಲ್ಲಿ ಸೇವೆಮಾಡುತ್ತಿದ್ದಾನೆ.   3  ಪ್ರತಿಯೊಬ್ಬ ಪ್ರಧಾನಯಾಜಕನೂ ದೇವರಿಗೆ ಯಜ್ಞಗಳನ್ನೂ ಕಾಣಿಕೆಗಳನ್ನೂ ಅರ್ಪಿಸಬೇಕು. ಆದ್ದರಿಂದ ನಮ್ಮ ಪ್ರಧಾನ ಯಾಜಕನೂ ದೇವರಿಗೆ ಏನನ್ನಾದರೂ ಅರ್ಪಿಸಲೇಬೇಕು.   4  ಆತನು ಇನ್ನೂ ಭೂಮಿಯ ಮೇಲೆ ವಾಸಮಾಡುತ್ತಿದ್ದರೆ ಯಾಜಕನಾಗಿರುತ್ತಿರಲಿಲ್ಲ. ಕಾರಣವೇನೆಂದರೆ, ಧರ್ಮಶಾಸ್ತ್ರದ ಪ್ರಕಾರ ದೇವರಿಗೆ ಕಾಣಿಕೆಗಳನ್ನು ಅರ್ಪಿಸುವ ಯಾಜಕರು ಈಗಾಗಲೇ ಇಲ್ಲಿದ್ದಾರೆ.   5  ಈ ಯಾಜಕರು ಮಾಡುವ ಕಾರ್ಯಗಳು ಪರಲೋಕದಲ್ಲಿನ ಕಾರ್ಯಗಳ ನಿಜವಾದ ಪ್ರತಿರೂಪಗಳೂ ಛಾಯೆಗಳೂ ಆಗಿವೆ. ಮೋಶೆಯು ದೇವದರ್ಶನ ಗುಡಾರವನ್ನು ನಿರ್ಮಿಸಲು ಸಿದ್ಧನಾದಾಗ ದೇವರು ಅವನಿಗೆ, “ನಾನು ಬೆಟ್ಟದಲ್ಲಿ ನಿನಗೆ ತೋರಿಸಿದ ಮಾದರಿಯ ಪ್ರಕಾರವೇ ಎಲ್ಲವನ್ನೂ ಎಚ್ಚರಿಕೆಯಿಂದ ನಿರ್ಮಿಸಬೇಕು” ಎಂದು ಹೇಳಿದ್ದು ಈ ಕಾರಣದಿಂದಲೇ.   6  ಆದರೆ ಯೇಸುವಿಗೆ ಕೊಡಲ್ಪಟ್ಟ ಕಾರ್ಯವು ಆ ಯಾಜಕರಿಗೆ ಕೊಡಲ್ಪಟ್ಟ ಕಾರ್ಯಕ್ಕಿಂತ ಅತ್ಯಂತ ಮಹತ್ವದ್ದಾಗಿದೆ. ಇದೇ ರೀತಿಯಲ್ಲಿ ಯೇಸು ತನ್ನ ಜನರಿಗಾಗಿ ದೇವರಿಂದ ತಂದ ಹೊಸ ಒಡಂಬಡಿಕೆಯು ಹಳೆಯದಕ್ಕಿಂತ ಶ್ರೇಷ್ಠವಾಗಿದೆ. ಉತ್ತಮ ಸಂಗತಿಗಳ ವಾಗ್ದಾನದ ಆಧಾರದ ಮೇಲೆ ಹೊಸ ಒಡಂಬಡಿಕೆಯು ಸ್ಥಾಪಿತವಾಗಿದೆ.   7  ಮೊದಲನೆ ಒಡಂಬಡಿಕೆ ಏನೂ ದೋಷವಿಲ್ಲದ್ದಾಗಿದ್ದರೆ, ಎರಡನೆ ಒಡಂಬಡಿಕೆಯ ಅಗತ್ಯವೇ ಇರಲಿಲ್ಲ.   8  ಆದರೆ ದೇವರು ಜನರಲ್ಲಿ ಯಾವುದೋ ದೋಷವನ್ನು ಕಂಡು ಹೇಳಿದ್ದೇನೆಂದರೆ: “ಇಸ್ರೇಲರೊಡನೆಯೂ ಯೆಹೂದ್ಯರೊಡನೆಯೂ ನಾನು ಹೊಸ ಒಡಂಬಡಿಕೆ ಮಾಡಿಕೊಳ್ಳುವ ಕಾಲ ಬರುತ್ತಿದೆ ಎಂದು ಪ್ರಭು ಹೇಳುತ್ತಾನೆ.   9  ಅದು, ಅವರ ಪಿತೃಗಳೊಡನೆ ನಾನು ಮಾಡಿಕೊಂಡ ಒಡಂಬಡಿಕೆಯಂತಿರುವುದಿಲ್ಲ. ಅವರನ್ನು ಈಜಿಪ್ಟಿನಿಂದ ಕೈಹಿಡಿದು ಹೊರಗೆ ಕರೆದುಕೊಂಡು ಬಂದ ಕಾಲದಲ್ಲಿ ಅವರೊಡನೆ ಆ ಒಡಂಬಡಿಕೆಯನ್ನೂ ಮಾಡಿಕೊಂಡೆನು. ಆದರೆ ಅವರು ಅದನ್ನು ಅನುಸರಿಸಲಿಲ್ಲವಾದ್ದರಿಂದ ಅವರಿಗೆ ವಿಮುಖನಾದೆನು ಎಂದು ಪ್ರಭು ಹೇಳುತ್ತಾನೆ.   10  ನಾನು ಇಸ್ರೇಲರೊಡನೆ ಮುಂದಿನ ದಿನಗಳಲ್ಲಿ ಮಾಡಿಕೊಳ್ಳುವ ಹೊಸ ಒಡಂಬಡಿಕೆಯು ಇಂತಿದೆ: ನನ್ನ ಆಜ್ಞೆಗಳನ್ನು ಅವರ ಮನಸ್ಸಿನಲ್ಲಿ ಇರಿಸುವೆನು; ಅವರ ಹೃದಯದ ಮೇಲೆ ಬರೆಯುವೆನು; ನಾನು ಅವರ ದೇವರಾಗಿರುವೆನು; ಅವರು ನನ್ನ ಜನರಾಗಿರುವರು.   11  ಒಬ್ಬನು ಸಹೋದರನಿಗಾಗಲಿ, ಬೇರೆಯವರಿಗಾಗಲಿ ಬೋಧಿಸಬೇಕಾಗಿರುವುದಿಲ್ಲ; ದೇವರನ್ನು ತಿಳಿದುಕೊಳ್ಳಿ ಎಂದು ಹೇಳಬೇಕಾಗಿರುವುದಿಲ್ಲ. ಏಕೆಂದರೆ ಅತ್ಯಂತ ಪ್ರಮುಖರನ್ನು ಮೊದಲುಗೊಂಡು ಅತ್ಯಂತ ಅಲ್ಪರಾದವರೆಲ್ಲರೂ ನನ್ನನ್ನು ತಿಳಿದುಕೊಂಡಿರುವರು.   12  ಅವರು ನನ್ನ ವಿರುದ್ಧವಾಗಿ ಮಾಡುವ ಎಲ್ಲಾ ಕೆಟ್ಟಕಾರ್ಯಗಳನ್ನು ಕ್ಷಮಿಸುವೆನು; ಅವರ ಪಾಪಗಳನ್ನು ನೆನಪಿಗೆ ತಂದುಕೊಳ್ಳುವುದಿಲ್ಲ.”   13  ದೇವರು ಇದನ್ನು ಹೊಸ ಒಡಂಬಡಿಕೆ ಎಂದು ಕರೆದನು. ಆದ್ದರಿಂದ ಮೊದಲನೆ ಒಡಂಬಡಿಕೆಯನ್ನು ದೇವರು ಹಳೆಯದಾಗಿ ಮಾಡಿದನು. ಯಾವುದು ಹಳೆಯದಾಗಿ ಉಪಯೋಗಕ್ಕೆ ಬಾರದಾಗುತ್ತದೋ ಅದು ಅದೃಶ್ಯವಾಗುವುದು.